ಯಹೂದ್ಯ ತತ್ತ್ವ ಚರಿತ್ರೆ -
ಬೈಬಲ್ಲಿನ ಕಾಲಾನಂತರ ಆರಂಭವಾದ ಯಹೂದ್ಯ ತತ್ತ್ವಜ್ಞಾನ ಹುಟ್ಟಿದ್ದು ಪ್ಯಾಲಸ್ತೀನ್‍ನಲ್ಲಲ್ಲ, ಅಲೆಕ್ಸಾಂಡ್ರಿಯದಲ್ಲಿ. ಅಲೆಕ್ಸಾಂಡ್ರಿಯದಲ್ಲಿದ್ದ ಯಹೂದ್ಯರು ಗ್ರೀಕ್ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಗಿದ್ದರು. ಇವರು ತಮ್ಮ ಸಾಂಪ್ರದಾಯಿಕ ಭಾವನೆಗಳಿಗೂ ಸ್ಟೋಯಿಕ್ ಪ್ಲೇಟೋ ವಾದಿಗಳ ಅಭಿಪ್ರಾಯಗಳಿಗೂ ಇರುವ ಸಾದೃಶ್ಯಗಳನ್ನು ಹುಡುಕತೊಡಗಿದರು. ಅದು ಅಲೆಕ್ಸಾಂಡ್ರಿಯದ ಫೈಲೋ ಎಂಬವನಲ್ಲಿ ಸ್ಪಷ್ಟರೂಪ ಪಡೆಯಿತು. ಇವನಲ್ಲಿ ಅನುಭಾವದ ಮನೋಭಾವವಿತ್ತು. ಇದರಿಂದ ನವ್ಯ ಪ್ಲೇಟೋವಾದದೆಡೆಗೆ ಇವನ ಮನಸ್ಸು ತಿರುಗಿತು. ವಿಶ್ವದ ಏಕತೆಯನ್ನು ಮನಗಂಡು ಇದಕ್ಕೆ ಕಾರಣವಾದ ಪರತತ್ತ್ವವನ್ನು ಅಂಗೀಕರಿಸಿದುದಲ್ಲದೆ ಈ ತತ್ತ್ವ ವಿಶ್ವದಲ್ಲಿ ಅಂತರ್ಯಾಮಿಯೆಂದು ಇವನು ಪ್ರತಿಪಾದಿಸಿದ; ಅಲ್ಲದೆ ಅದು ವಾಕ್ಕು, ಮನಸ್ಸುಗಳಿಗೆ ನಿಲುಕದ ಅನಿರ್ವಚನೀಯವೆಂದು ಬೋಧಿಸಿದ.

ಪ್ಲೇಟೋ ಮತ್ತು ಅರಿಸ್ಟಾಟಲರಂತೆ ಫೈಲೋ ಸಹ ಧ್ಯಾನಮಾರ್ಗದ ಅವಲಂಬನೆಯೇ ಧರ್ಮದ ತಿರುಳು ಎಂದ. ಇವನ ಅನಂತರ ಸುಮಾರು ಒಂಬತ್ತು ಶತಮಾನಗಳ ಕಾಲ ಈ ತತ್ತ್ವ ಬೆಳೆಯದೆಯ ತಟಸ್ಥವಾಗಿತ್ತು. ಆಮೇಲೆ ಸಾದ್ಯ ಎಂಬಾತ ಮಧ್ಯಕಾಲೀನ ಯಹೂದ್ಯ ತತ್ತ್ವಚರಿತ್ರೆಯಲ್ಲಿ ಆಗಿ ಹೋದ; ಈ ಕಾಲದ ತತ್ತ್ವಜ್ಞಾನದಲ್ಲಿ ಪ್ರಭಾವಯುತವಾದ ಕಲ್ಪನೆ 'ಕಲಮ- ಪರತತ್ತ್ವದ ಏಕತೆ ಮತ್ತು ನ್ಯಾಯಪರತೆ. ಇದನ್ನು ಈತ ತಾರ್ಕಿಕವಾಗಿ ಸಮರ್ಥಿಸಿ ಯಹೂದ್ಯ ಧರ್ಮಾನುಗುಣವಾಗಿದೆಯೆಂದು ತೋರಿಸಿಕೊಟ್ಟ. ಪ್ಲೇಟೋ ಅರಿಸ್ಟಾಟಲ್, ಸ್ಟೋಯಿಕ್ಕರು ಮತ್ತು ನಿಯೋಪ್ಲೋಟೈನಸ್-ಈ ದರ್ಶನಗಳ ಪ್ರಭಾವ ಇವನ ಮೇಲೆ ಸ್ಪಷ್ಟವಾಗಿ ಮೂಡಿದೆ. ಸಾದ್ಯನ ಅಭಿಪ್ರಾಯದಲ್ಲಿ ತರ್ಕಕ್ಕೂ ಯಹೂದ್ಯ ಸಂಪ್ರದಾಯಕ್ಕೂ ಅಸಾಮಂಜಸ್ಯವಿಲ್ಲ. ಇವನ ಮತದಲ್ಲಿ ಪರತತ್ವ ನಿರ್ಗುಣವಲ್ಲ; ಚೈತನ್ಯ, ಜ್ಞಾನಶಕ್ತಿಗಳು ಇದರ ಗುಣಗಳು. ಇವು ಸೃಷ್ಟಿಕರ್ತನಲ್ಲಿ ಸಹಜವಾಗಿ ಇರಬೇಕಾದ ಗುಣಗಳು. ಈಶ್ವರನ ಗುಣಗಳನ್ನು ಒಂದು ಮಾತಿನಲ್ಲಿ ಹೇಳಲು ಅಸಾಧ್ಯ. ಇದಕ್ಕೆ ಮಾನವ ಭಾಷೆಯ ಅಸಾಮಥ್ರ್ಯವೇ ಕಾರಣ. ಸಾದ್ಯನನ್ನು ಮಧ್ಯಮಕಾಲೀನ ಯಹೂದ್ಯ ತತ್ತ್ವದ ಜನಕನೆಂದು ವರ್ಣಿಸಲಾಗುತ್ತದೆ.

ಸಾಲೊಮನ್ ಇಬು ಗೆಬಿರಾಲ್ (ಸು. 1020-70) ಕವಿಯೂ ದಾರ್ಶನಿಕನೂ ಆಗಿದ್ದ. ಸಾದ್ಯನ ಅನಂತರ ಇವನು ಈಶ್ವರ ಸರ್ವತಂತ್ರ ಸ್ವತಂತ್ರನೇನೋ ಹೌದು, ಆದರೆ ನಿಯಮ ರಹಿತನಲ್ಲ; ಅಷ್ಟೇ ಅಲ್ಲ, ಅವನು ನಿಯಮಸ್ವರೂಪನೇ ಆಗಿದ್ದಾನೆ. ಅವನ ಸಂಕಲ್ಪ ಶಕ್ತಿಯೇ ಈ ನಿಯಮದ ಮೂಲ ಎಂದು ಸಾರಿದ.

ಗೆಬಿರಾಲನ ಕಾಲದಲ್ಲಿಯೇ ಇದ್ದ ಇನ್ನೊಬ್ಬ ತತ್ತ್ವಜ್ಞಾನಿ ಬಹ್ಯ ಇಬ್ನ್ ಪಕುಡ. ಯಹೂದ್ಯರ ನೀತಿತತ್ತ್ವಕ್ಕೆ ಆಶ್ರಯವಾದ 'ಹೃದಯದ ಕರ್ತವ್ಯಗಳು (ದಿ ಡ್ಯೂಟೀಸ್ ಆಫ್ ದಿ ಹಾರ್ಟ್) ಎಂಬ ಗ್ರಂಥವನ್ನು ಬರೆದ. ಅದರಲ್ಲಿ ಶ್ರದ್ಧೆ, ವಿನಯ ಮತ್ತು ದೇವರಲ್ಲಿ ನಾಟಿದ ಪ್ರೇಮ-ಇವೇ ಹೃದಯದ ಕರ್ತವ್ಯಗಳೆಂದು ಸಾರಿದ. ಜ್ಞಾನ-ಅನುಷ್ಠಾನ ಎರಡೂ ಅಗತ್ಯ; ದೈವಭಕ್ತನಜೀವನ ಯಮ-ನಿಯಮಗಳಿಂದ ಕೂಡಿರಬೇಕು ಎಂದು ಇವನು ಬೋಧಿಸಿದ. 

ಸುಮಾರು ಹನ್ನೆರಡನೆಯ ಶತಮಾನದಲ್ಲಿದ್ದ ಏಬ್ರಹಾಂ ಹಿಯ್ಯ ಎಂಬ ತತ್ತ್ವಜ್ಞಾನಿ ತನ್ನ ಪೂರ್ವದಲ್ಲಿ ಅರಬ್ಬೀ ಭಾಷೆಯಲ್ಲಿ ತತ್ತ್ವಜ್ಞಾನವನ್ನು ಬರೆಯುತ್ತಿದ್ದುದನ್ನು ತಪ್ಪಿಸಿ ಹೀಬ್ರೂ ಭಾಷೆಯಲ್ಲಿ ಬರೆಯತೊಡಗಿದ. ಜಗತ್ತು, ಜೀವಾತ್ಮ ಮತ್ತು ಬುದ್ಧಿ ಎಂಬ ತತ್ತ್ವತ್ರಯವನ್ನು ಬೋಧಿಸಿದ ಇವನು ಯಹೂದ್ಯರಲ್ಲಿ ಬೂದ್ಧಿತತ್ತ್ವ ಪರಿಶುದ್ಧವಾಗಿ ವಿಕಾಸಗೊಂಡಿದೆಯೆಂದೂ ಅವರು ಭಗವಂತ 'ಆರಿಸಿದ ಜನ ಎಂದೂ ನಂಬಿದ್ದ. ಇದೇ ರೀತಿಯಲ್ಲಿ 1085-1141ರಲ್ಲಿದ್ದ ಯಹೂದಾ ಹಲ್ಲಾಯಿ ಕವಿಯೂ ದಾರ್ಶನಿಕನೂ ಆಗಿದ್ದು ಸಂವಾದರೂಪದಲ್ಲಿ ತನ್ನ ದರ್ಶನವನ್ನು ಪ್ರತಿಪಾದಿಸಿದ್ದರಿಂದ ಅದು ಜನಪ್ರಿಯವಾಯಿತು.

ಹನ್ನೆರಡನೆಯ ಶತಮಾನದಿಂದ ಈಚಿನ ಯಹೂದ್ಯ ತತ್ತ್ವಜ್ಞಾನದಲ್ಲಿ ಅವಿಸೆನ್ನ ಮುಖ್ಯನಾದವನು. ಇವನಿಂದಾಗಿ ಈ ತತ್ತ್ವಜ್ಞಾನದಲ್ಲಿ ಅರಿಸ್ಟಾಟಲನ ಪ್ರಭಾವ ಗಾಢವಾಗಿ ಪ್ರವೇಶಿಸಿತು. ಈ ಕಾಲದ ಮೋಸಸ್ ಮೈಮೋನಿಡಿಸ್ (1135-1204) 'ಸಂಶಯಗ್ರಸ್ತರಿಗೆ ಮಾರ್ಗದರ್ಶನ ಎಂಬ ತನ್ನ ಪ್ರಸಿದ್ಧವೂ ಪ್ರಭಾವಶಾಲಿಯೂ ಆದ ಗ್ರಂಥದಲ್ಲಿ ಈಶ್ವರನ ಗುಣಗಳನ್ನು ಕುರಿತು ಗಾಢವಾಗಿ ಆಲೋಚಿಸಿದ್ದಾನೆ. ಈ ಗುಣಗಳನ್ನು ಸಮರ್ಪಕವಾಗಿ ವರ್ಣಿಸುವುದು ಅಸಾಧ್ಯವಾದರೂ ಅವು ಕಲ್ಯಾಣ ಗುಣಗಳೇ ಎಂದು ಸ್ಪಷ್ಟಪಡಿಸಿ, ದಾರ್ಶನಿಕನಿಗಿಂತಲೂ ಪ್ರವಾದಿ ಶ್ರೇಷ್ಠನೆಂದು ಏಕೆಂದರೆ ಪ್ರವಾದಿ ದಾರ್ಶನಿಕನೂ ಋಷಿಯೂ ಏಕಕಾಲದಲ್ಲಿ ಆಗಿದ್ದಾನೆಂದೂ ಇವನು ಬೋಧಿಸಿದ. ಪ್ಲೇಟೋವಿನಂತೆ ಇವನೂ ಋಷಿಗಳು ರಾಜರಾಗಬೇಕೆಂದೂ ಆಗಲೇ ರಾಷ್ಟ್ರಕ್ಷೇಮ ಸಾಧ್ಯವೆಂದು ವಾದಿಸಿದ. ಇವನ ಪ್ರಭಾವ ಮುಂದಿನ ಪೀಳಿಗೆಯ ಮೇಲೆ ಅತಿಶಯವಾಗಿ ಆಯಿತು.

ಅನಂತರ ಬಂದ ತತ್ತ್ವಜ್ಞಾನಿ ಗೆರ್ಸೋನೈಡಿಸ್ (1288-1344). ಅರಿಸ್ಟಾಟಲನಂತೆಯೇ ಜಗದೀಶ್ವರನನ್ನು ಜಗತ್ತಿನ ಪ್ರಥಮ ಸಂಚಾಲಕ (ಪ್ರೈಮ್ ಮೂವರ್) ಎಂದು ಭಾವಿಸಿದ. ಆಮೇಲೆ ಬಂದ ಕ್ರೆಸ್‍ಕಾಸ್ (1340-1410) ಈಶ್ವರನ ಜ್ಯೋತಿ' (ಲೈಟ್ ಆಫ್ ದಿ ಲಾರ್ಡ್) ಎಂಬ ಗ್ರಂಥವನ್ನು ಬರೆದು ಈಶ್ವರನ ಪರಿಪೂರ್ಣ ವ್ಯಕ್ತಿತ್ವವನ್ನು ಸ್ಥಾಪಿಸಿದ. ಸೌಶೀಲ್ಯವೇ ಈಶ್ವರನ ಪ್ರಧಾನ ಗುಣವೆಂದೂ ಅವನ ಇತರ ಗುಣಗಳು ಅದರ ರೂಪಾಂತರಗಳೆಂದೂ ಏನಾದರೂ ಈಶ್ವರನ ಮೂಲಸ್ವರೂಪವನ್ನು ಅರಿಯುವುದು ದುರ್ಲಭವೆಂದೂ ಇವನು ಹೇಳಿದ.
ಅನಂತರ ಮತ್ತೊಬ್ಬ ಪ್ರಧಾನ ತತ್ತ್ವಜ್ಞಾನಿಯ ಹೆಸರನ್ನು ಹೇಳಬೇಕಾದರೆ ಹದಿನೆಂಟನೆಯ ಶತಮಾನಕ್ಕೆ ಬರಬೇಕು. ಮೋಸಸ್ ಮೆಂಡಲ್‍ಸಾನ್ (1729-86) ಧರ್ಮದ ಸ್ವರೂಪವನ್ನು ದರ್ಶನದ ಚೌಕಟ್ಟಿನಲ್ಲಿ ಅಳವಡಿಸಿದ ಹಾಗೂ ಶ್ರುತಿ ಎಂಬುದು ವಿಧಿನಿಷೇಧಗಳಿಗೆ ಮಾತ್ರ ಮೀಸಲೆಂದು ಪ್ರತಿಪಾದಿಸಿದ. ಆಧುನಿಕ ಕಾಲದ ಯಹೂದ್ಯ ತತ್ತ್ವಜ್ಞಾನ ಇವನ ಕಾಲದಿಂದ ಪ್ರಾರಂಭವಾಯಿತೆನ್ನಬಹುದು. ಅನಂತರ ಬಂದವ ಹೆರ್ಮನ್‍ಕೋಹೆನ್. ಈತ ಮತಧರ್ಮವನ್ನು ತಾರ್ಕಿಕವಾಗಿ ಸಮರ್ಥಿಸಿದ. ಮಾರ್ಟಿನ ಬೂಬರ್ ಎಂಬಾತ ತನ್ನ ಪ್ರಭಾವಶಾಲಿಯಾದ ಗ್ರಂಥ ' ನಾನು ಮತ್ತು ನೀನು" (ಐ ಅಂಡ್ ದೌ)ದಲ್ಲಿ ಪ್ರವಾದಿಯ ನೇರವಾದ ತತ್ತ್ವದರ್ಶನವನ್ನು ವಿವೇಚಿಸಿದ್ದಾನೆ. ದರ್ಶನವನ್ನು ಕೇವಲ ತರ್ಕದಿಂದ ಸಾಧಿಸಲಾಗುವುದಿಲ್ಲವೆಂಬುದು ಇವನ ಅಭಿಪ್ರಾಯ. ಜೀವಾತ್ಮ ಪರಮಾತ್ಮರ ಸಂಬಂಧನ್ನು ಕುರಿತು ಆಳವಾಗಿ ಚಿಂತಿಸಿ ಇವೆರಡರ ಪರಸ್ಪರ ಸಂಬಂಧವೇ ಮಾನವರೆಲ್ಲರ ಪರಸ್ಪರ ಸಂಬಂಧಗಳ ಮೂಲವೆಂದು ಪ್ರತಿಪಾದಿಸಿದ್ದಾರೆ. ಇವನ ತತ್ತ್ವಜ್ಞಾನ ಧ್ಯಾನಕ್ಕಿಂತ ಹೆಚ್ಚಾಗಿ ಕ್ರಿಯಾಶೀಲತೆಗೆ ಪ್ರಾಧಾನ್ಯವನ್ನಿತ್ತಿದೆ. ಈಶ್ವರ ಜೀವಾತ್ಮ-ಜಗತ್ತು-ಇವು ಇವನ ತತ್ತ್ವತ್ರಯ. ಇವುಗಳಿಂದ ಸೃಷ್ಟಿ, ವಿಕಾಸ, ಮೋಕ್ಷ ಎಂಬ ಮೂರು ಕಲ್ಪನೆಗಳು ಕ್ರಮವಾಗಿ ಹೊರಪಡುತ್ತದೆ. ಈ ತತ್ತ್ವತ್ರಯದ ಪರಸ್ಪರ ಸಂಬಂಧವೇ ಇತಿಹಾಸದ ತಿರುಳು ಎಂದು ಬೂಬರ್ ಹೇಳುತ್ತಾನೆ.  														
 (ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ